"ಹುಚ್ಚರ ಸಂತೆ"ಯಲ್ಲಿ ಹೀಗೊಂದು ಚರ್ಚೆ
-----------------------------------------
ಟಿ. ಆರ್. ಪಿ.ಗೂ ಮೀರಿದ್ದೂ ಇನ್ನೊಂದಿದೆ.
ಅಕ್ಸಿಜನ್ ಇಲ್ಲದೇ ಪತ್ರಿಕೋದ್ಯಮವೇ ಇಲ್ಲ ಎಂಬ ಭ್ರಮೆಯಲ್ಲಿರುವವರಿಗೆ
ಅದನ್ನೂ ಮೀರಿದ ಸಾಮಾಜಿಕ ಕರ್ತವ್ಯವೂ ಇದೆ
ನಿಮ್ಮ ಟೀಕೆಗೆ ಕಿವಿಯಾಗಿ, ಬದಲಾಗುತ್ತೇವೆ.
" ಎಸ್." ಅದ್ಭುತವಾದ ವಿಷಯ. ಮಾಧ್ಯಮಲೋಕದಲ್ಲಿ ಇಂತಹದ್ದೊಂದು ಪ್ರಯತ್ನ ನಡೆದಿರಲಿಲ್ಲ.
ಅದನ್ನು ಪಬ್ಲಿಕ್ ಟಿವಿಯ ಮಿತ್ರರು ಆಯೋಜಿಸಿದ್ದರು. ಹುಚ್ಚ ವೆಂಕಟ್ ಗೆ ಧನ್ಯವಾದಗಳು.
ಸಾಮಾಜಿಕ ಕಳಕಳಿಗಾಗಿಯೇ ಪತ್ರಿಕೆ ಮತ್ತು ದೃಶ್ಯ ಮಾಧ್ಯಮ ನಡೆಸುತ್ತೇವೆ ಎಂಬುದು ಸುಳ್ಳು.
ಒಂದು ಉದ್ಯಮವಾಗಿ, ವ್ಯವಹಾರಿಕವಾಗಿಯೇ ನಡೆಸುತ್ತಿದ್ದೇವೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.
ನೇರ ನುಡಿಯನ್ನು ಅಭಿನಂದಿಸೋಣ.
ಸಂವಿಧಾನದ ನಾಲ್ಕನೇ ಅಂಗವಾಗಿ
ಜನರಿಗಾಗಿ, ಜನರಿಗೋಸ್ಕರ, ಅನ್ಯಾಯದ ವಿರುದ್ಧ, ಭ್ರಷ್ಟಾಚಾರದ ವಿರುದ್ಧ ಧ್ವನಿಯಾಗಿ ಕಾರ್ಯ ನಿರ್ವಹಸುವುದಕ್ಕಾಗಿ ಭಾರತದ ಸಂವಿಧಾನದಲ್ಲಿ
ಶಾಸಕಾಂಗ
ಕಾರ್ಯಾಂಗ
ನ್ಯಾಯಾಂಗದ
ಜೊತೆ
ಪತ್ರಿಕಾರಂಗಕ್ಕೂ
ಒಂದು ಸ್ಥಾನದ ಜೊತೆ, ಸಾಮಾಜಿಕ ಜವಾಬ್ದಾರಿಯನ್ನು ನೀಡಿದೆ.
ಅದನ್ನು ಅರ್ಥ ಮಾಡಿಕೊಂಡಿರುವವರು ಎಷ್ಟು ಜನ ?
ಸಮಯಕ್ಕೆ ತಕ್ಕ ಹಾಗೆ ಸಂಸ್ಕೃತಿ ಬದಲಾಗುತ್ತಿವೆ. ಆಚಾರ ವಿಚಾರಗಳು ಬದಲಾಗುತ್ತಿವೆ. ಮನುಷ್ಯನಲ್ಲಿ ಶಾಂತಿ ಮಾಯವಾಗುತ್ತಾ, ದ್ವೇಷ, ಕೌರ್ಯ, ಸ್ವಾರ್ಥ ಹೆಚ್ಚಾಗುತ್ತಿದೆ.
ಆದರೆ ನೀರು, ಬೆಳಕು, ಗಾಳಿ ಬದಲಾಗಿದೆಯೇ ?
ಬೇರೆಲ್ಲಾ ಬದಲಾದರೂ, ಪ್ರಕೃತಿ ಬದಲಾಗುತ್ತಿಲ್ಲ. ಶಾಸಕಾಂಗ, ಕಾರ್ಯಾಂಗ ಕೆಲವೊಮ್ಮೆ ನ್ಯಾಯಾಂಗ (ಲೋಕಾಯುಕ್ತರ ಹಗರಣ) ತನ್ನ ಹಾದಿ ಬದಲಿಸಿಕೊಂಡಿವೆ
ನಾವು (ಪತ್ರಿಕಾರಂಗವು) ಬದಲಾಗುತ್ತಿದ್ದೇವೆ ಎಂದು ಸಮರ್ಥಿಸಿಕೊಂಡರೆ
ಅವರಿಗೂ ನಿಮಗೂ ಏನು ವ್ಯತ್ಯಾಸವಿದೆ ?
ಸ್ವಾತಂತ್ರ್ಯ ಪೂರ್ವದಲ್ಲಿ ಸ್ವಾತಂತ್ರ್ಯ ಚಳುವಳಿಗಳ ಪ್ರಚಾರಕ್ಕಾಗಿ ಪತ್ರಿಕೆಗಳನ್ನು ಬಳಸಿಕೊಳ್ಳಲಾಗುತ್ತಿತ್ತು.
ಅಂದು ಕಣ್ಣ ಮುಂದೆ ಇದ್ದಿದ್ದು. ಜಾಗೃತಿ, ಸಂಘಟನೆ ಮತ್ತು ಸ್ವಾತಂತ್ರ್ಯ.
ಇದಕ್ಕಾಗಿ ಪತ್ರಕರ್ತರು ತಮ್ಮನ್ನು ತಾವು ತೊಡಗಿಸಿಕೊಂಡಿರಲಿಲ್ಲವೇ ?
ಆವತ್ತು ಜಗತ್ತಿನಲ್ಲಿ
ನ್ಯಾಯ, ನೀತಿ, ಧರ್ಮಕ್ಕೆ ಜನರು ಅಂಜುತ್ತಿದ್ದರು. ಅಂದಿನ ದಿನಗಳಲ್ಲಿ ಬರೀ ಸುದ್ದಿಗಳಿಗಾಗಿ ಮಾತ್ರವೇ ಪತ್ರಿಕೆಗಳು ಬಳಕೆಯಾಗುತ್ತಿದ್ದವು.
ಆದರೆ ಇಂದಿನ ಯುಗದಲ್ಲಿ
ಅತಿಯಾದ ಭ್ರಷ್ಟಾಚಾರ, ಮೋಸ, ಅನೀತಿ, ಅನ್ಯಾಯ, ಅಧರ್ಮಗಳೇ ತಾಂಡವವಾಡುತ್ತಿದೆ.
ಈ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ಜವಾಬ್ದಾರಿಯನ್ನು ಅರಿತು ಪ್ರಾಮಾಣಿಕವಾಗಿ ತಮ್ಮ ವೃತ್ತಿಯನ್ನು ಮಾಡಬೇಕಾಗುತ್ತದೆ.
ಶಾಸಕಾಂಗ ಹಾಗೂ ಕಾರ್ಯಾಂಗದಲ್ಲಿ ಭ್ರಷ್ಟಾಚಾರ ಇದೆ.
ಮೂವತ್ತು ಸಾವಿರದಲ್ಲಿ ಚುನಾವಣೆ ಎದುರಿಸುತ್ತಿದ್ದವರು, ಮೂರು ಕೋಟಿ ಖರ್ಚು ಮಾಡಿ ಚುನಾವಣೆ ಎದುರಿಸುತ್ತಿದ್ದೇವೆ ಎಂಬ ಸತ್ಯವನ್ನು ವಿಧಾನಸಭೆಯ ಸದನದಲ್ಲಿ ಹೇಳಿಕೆ ಕೊಟ್ಟಿದ್ದ ಮಾಜಿ ಸ್ವೀಕರ್, ಶಾಸಕರಾದ ರಮೇಶ್ ಕುಮಾರ್ ರವರು ಪಕ್ಕದಲ್ಲಿಯೇ ಕುಳಿತಿದ್ದಾರೆ.
ಮನಸ್ಸು ಮಾಡಿದರೆ ಸಿ.ಟಿ. ರವಿಯವರು ಒಂದು ಟಿವಿ ಚಾನೆಲ್ ಪ್ರಾರಂಭ ಮಾಡಿಬಿಡುತ್ತಿದ್ದರು ಎಂದು ರಂಗನಾಥರವರೇ ಹೇಳುವ, ಹಿಂದು ಸಂಘಟನೆಗಳಲ್ಲಿ ಕಾರ್ಯಕರ್ತರಾಗಿದ್ದ ಮಾಜಿ ಸಚಿವ, ಶಾಸಕರಾದ ಸಿ. ಟಿ. ರವಿಯವರು ಸಹ ಮತ್ತೊಂದು ಕಡೆ ಕುಳಿತಿದ್ದಾರೆ.
ಲೋಕಸತ್ತಾ ಪಕ್ಷದಿಂದ ಆಮ್ ಆದ್ಮಿಯತ್ತ ಹೊರಳಿ, ದೇಶದಲ್ಲಿ ಬದಲಾವಣೆ ತಂದುಬಿಡುತ್ತೇವೆ, ಭ್ರಷ್ಟಾಚಾರ ನಿರ್ಮೂಲನೆ ಮಾಡಿಬಿಡುತ್ತೇವೆ ಎಂದು ಹೊರಟ ಆಮ್ ಆದ್ಮಿ ಪಕ್ಷದ ನೇತಾರ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲರ ಪಕ್ಷದ ವಕ್ತಾರರಾಗಿ, ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸದೇ ಇತರರಿಗೆ ಹಾದಿ ಮಾಡಿಕೊಟ್ಟ ರವಿಕೃಷ್ಣರೆಡ್ಡಿಯವರೂ ಇದ್ದರು.
ಇವರೆಲ್ಲರೂ ಶಾಸಕಾಂಗದಡಿಯಲ್ಲಿದ್ದಾರೆ.
ಮೂವತ್ತು ಸಾವಿರದಿಂದ ಮೂರು ಕೋಟಿ ಖರ್ಚು ಮಾಡುತ್ತಿದ್ದೇವೆ ಎಂಬ ಸದನದಲ್ಲಿನ ಹೇಳಿಕೆಗಳು ಮಾಧ್ಯಮಗಳ ಕಿವಿಗೆ ಬೀಳುತ್ತಿಲ್ಲ. ಮೂರು ಕೋಟಿ ಖರ್ಚು ಮಾಡಿ ಚುನಾವಣೆಯಲ್ಲಿ ಗೆದ್ದವರು ಐದು ವರ್ಷದಲ್ಲಿ ಎಷ್ಟು ಪಟ್ಟು ಹಣ ಗಳಿಸಬಹುದು ?
ಮೂರು ಕೋಟಿ ಹಣ ಹೇಗೆ ಬರುತ್ತೆ ?
ಸಂಘದ ಕಾರ್ಯಕರ್ತರಾದವರು ಟಿವಿ ಚಾನೆಲ್ ಮಾಡುವಷ್ಟು ಎತ್ತರಕ್ಕೆ ಬೆಳೆಯುತ್ತಾರೆ.
ಅವರೇ ಹೇಳುವ ಹಾಗೆ ಅವರ ಪಕ್ಷದ ಟಿಕೆಟ್ ನೀಡಬೇಕಾದರೆ ಎಷ್ಟು ಹಣ ಕೊಡಬಹುದು, ಎಷ್ಟು ಖರ್ಚು ಮಾಡಬಹುದು ಎಂಬ ಆಧಾರದ ಮೇಲೆಯೇ ಚುನಾವಣಾ ಪ್ರಕ್ರಿಯೆ ನಡೆಯುತ್ತದೆ ಎಂಬ ಘನ ಘೋರ ಸತ್ಯವನ್ನು ನಿಮ್ಮ ಮುಂದೆಯೇ ಬಿಚ್ಚಿಟ್ಟಿದ್ದು ಟಿವಿ ಮಾಧ್ಯಮಗಳ ಗಮನಕ್ಕೆ ಬರುವುದೇ ಇಲ್ಲ.
ಪ್ರಾಮಾಣಿಕವಾಗಿ, ಭ್ರಷ್ಟಾಚಾರದ ವಿರುದ್ಧ ಆಮ್ ಆದ್ಮಿ ಪಕ್ಷವನ್ನು ಹುಟ್ಟುಹಾಕಿ, ಜನರಿಗಾಗಿ ಚುನಾವಣೆ ಎದುರಿಸಿ, ಆಡಳಿತ ನಡೆಸುತ್ತೇವೆ ಎಂಬ ವಾಗ್ದಾನ ಮಾಡಿದ್ದ ಶ್ರೀ ಅರವಿಂದ ಕೇಜ್ರಿವಾಲರು ಬಿಹಾರದಲ್ಲಿ ಲಾಲೂ ಪ್ರಸಾದರನ್ನು ಅಪ್ಪಿಕೊಳ್ತಾರೆ ಇವುಗಳು ಕಾಣಿಸುವುದಿಲ್ಲ.
ಬಿಗ್ ಬಾಸ್ ನಲ್ಲಿ ಸೋತ ಅರುಣ್ ಸಾಗರ್ ಅವರೇ ಹೇಳುವ ಹಾಗೆ ಟಿ.ಆರ್.ಪಿಗಾಗಿ ತಮ್ಮನ್ನು ಸೋಲುವ ಹಾಗೆ ಮಾಡಿದ್ದಾರೆ ಎಂಬ ಸತ್ಯವನ್ನು ಬಿಚ್ಚಿಡುತ್ತಾರೆ. ಒಂದು ರಿಯಾಲಿಟಿ ಷೋನ ಮೋಸದ ಜಾಲವು ತಮ್ಮ ಕಣ್ನೇದುರೇ ಅನಾವರಣಗೊಳ್ಳುತ್ತಿದ್ದರೂ, ಜನರಿಗೆ ಮೋಸ ಮಾಡುತ್ತಿದ್ದರೂ, ಅವುಗಳು ಸುದ್ದಿಯೇ ಆಗುವುದಿಲ್ಲ.
1200 ಜನರ ಅಭಿಪ್ರಾಯದ ಟಿ. ಆರ್.ಪಿ.ಯನ್ನು ನಂಬಿಕೊಂಡು ಪವಿತ್ರವಾದ ಪತ್ರಿಕೋದ್ಯಮವನ್ನು ನಡೆಸುತ್ತಿದ್ದೀರಿ ಎಂದಾಯಿತು ?
ನ್ಯೂಸ್ ಚಾನೆಲ್ ಗಳು ಬರುವ ಮುಂಚೆ ಮನರಂಜನೆ ಚಾನೆಲ್ ಗಳು ಇದ್ದವು ಒಂದು ಘಂಟೆ ನ್ಯೂಸ್ ನೋಡುತ್ತಿದ್ದರು. ಪತ್ರಿಕೆಗಳನ್ನು ಓದುತ್ತಿದ್ದರು. ಆಗಲೂ ಜನ ಜೀವಿಸುತ್ತಿದ್ದರು. ಈಗಲೂ ಜನ ಜೀವಿಸುತ್ತಿದ್ದಾರೆ.
ನ್ಯೂಸ್ ಚಾನೆಲ್ ಗಳು ಪ್ರಾರಂಭವಾದ ಮೇಲೆ ಸಾಮಾಜಿಕ ಜವಾಬ್ದಾರಿ ಹೆಚ್ಚಿತ್ತು.
ಮುದ್ರಣ ಮಾಧ್ಯಮಗಳಿಂದ ದೃಶ್ಯ ಮಾಧ್ಯಮಗಳತ್ತ ಹೊರಳಲಾರಂಭಿಸಿದರು.
ದಯವಿಟ್ಟು ಅರ್ಥ ಮಾಡಿಕೊಳ್ಳಿ ಸಂವಿಧಾನದಲ್ಲಿ ಹೆಚ್ಚಿನ ಜವಾಬ್ದಾರಿ ತಮ್ಮೆಲ್ಲರ ಮೇಲಿದೆ.
ನಿಮ್ಮ ಅಕ್ಕ ಪಕ್ಷ ಕೂರಿಸಿಕೊಂಡಿರುವ ರಾಜಕಾರಣಿಗಳು (ಬಹುತೇಕ ಎಲ್ಲಾ ರಾಜಕಾರಣಿಗಳು) ಸಾಮಾನ್ಯ ವ್ಯಕ್ತಿಗಳಾಗಿದ್ದವರೇ...ಅತಿ ಶ್ರೀಮಂತರು ಹೇಗಾದರು?.
ರಾಜಕೀಯಕ್ಕೆ ಬರುವವರು ಸಮಾಜ ಸೇವೆಗೆ ಅಂತಲೇ ಬರುವುದು.
ಸಮಾಜಸೇವೆ ಅವರ ಗುರಿಯಾಗಬೇಕು. ಶಾಸಕರಿಗೆ, ಸಂಸದರಿಗೆ ನಿಗದಿಯಾಗಿರುವ ವೇತನ, ಭತ್ಯೆಗಳಷ್ಟೇ ಬಳಸಿಕೊಂಡು ತಮ್ಮ ಸಾರ್ವಜನಿಕ ಜೀವನ ನಡೆಸಲೇಬೇಕು.
ಅದನ್ನೂ ಮೀರಿ ಕೋಟಿಗಳಿಗೆ ಲೆಕ್ಕವಿಲ್ಲದಷ್ಟು ಆಸ್ತಿ ವೃದ್ದಿಯಾಗುತ್ತಿರುವುದು ಹೇಗೆ ? ಮೂವತ್ತು ಸಾವಿರಗಳಿಂದ, ಮೂರು ಕೋಟಿ ಚುನಾವಣಾ ವೆಚ್ಚಕ್ಕೆ ಬಳಸಿಕೊಳ್ಳುವ ಹಣ ಬರುತ್ತಿರುವುದಾದರೂ ಎಲ್ಲಿಂದ ? ಈ ವಿಷಯಗಳು ಪ್ರಾಮಾಣಿಕ ಪತ್ರಕರ್ತರ ಅರಿವಿಗೆ ಬರುತ್ತಿಲ್ಲವೇ ?
ಶಾಸಕಾಂಗದಲ್ಲಿ ಭ್ರಷ್ಟಾಚಾರ ಮಿತಿ ಮೀರಿ ಕೂತಿದೆ. ಅದಕ್ಕೆ ಪೂರಕವಾಗಿ
ಕಾರ್ಯಾಂಗದಲ್ಲಿ ಒಬ್ಬ ಜವಾನನಿಂದ ಹಿಡಿದು ಐ.ಎ.ಎಸ್. ಅಧಿಕಾರಿಯವರೆವಿಗೂ ಕೋಟಿ ಕೋಟಿ ಆಕ್ರಮ ಆಸ್ತಿ ಗಳಿಕೆಯಾಗುತ್ತಿದೆ.
ಜನ ಸಾಮಾನ್ಯರು ಕಟ್ಟುವ ತೆರಿಗೆ ಹಣದಿಂದ ಸಂಬಳವನ್ನೂ ಪಡೆದುಕೊಳ್ಳುತ್ತಾ, ಜನರ ಮುಂದೆ ಲಂಚ-ಭಿಕ್ಷೆಗಾಗಿ ಕೈಯೊಡ್ಡಿ ತಮ್ಮ ಸಂಸಾರಕ್ಕೆ ಭಿಕ್ಷೆಯ ಊಟ, ಭಿಕ್ಷೆಯಿಂದ ಬಟ್ಟೆ, ಭಿಕ್ಷೆಯಿಂದ ಮನೆ, ಭಿಕ್ಷೆ ಮದುವೆಗಳನ್ನು ಮಾಡಿಕೊಂಡು ಜನರಿಗೆ ಮೋಸ ಮಾಡುತ್ತಿದ್ದಾರಲ್ಲ. ಕಾರ್ಯಾಂಗ ಮತ್ತು ಶಾಸಕಾಂಗಗಳು ಪ್ರತಿರೂಪವಾಗಿ ಒಬ್ಬರನ್ನೂ ಒಬ್ಬರು ಮೀರಿಸುವ ಪೈಪೋಟಿಯಲ್ಲಿ ಸಾಗುತ್ತಿದ್ದಾರಲ್ಲ ಇವು ಮಾಧ್ಯಮಗಳ ಕಣ್ಣಿಗೆ ಕಾಣಿಸುತ್ತಿಲ್ಲವೇ ?
ಆ ಚಾನೆಲ್ ನವರು ಬ್ರೇಕಿಂಗ್ ನ್ಯೂಸ್ ಹಾಕುವ ಮುನ್ನ ನಾವು ಹಾಕಬೇಕು.. ಇವರೇನು ಹೆಡ್ ಲೈನ್ ಕೊಟ್ತಾರೋ ಅದಕ್ಕಿಂತ ಆಕರ್ಷಕ ಹೆಡ್ ಲೈನ್ ಕೊಡಬೇಕು. ಕಾಂಟ್ರೋವಸಿ ಕ್ರೀಯೇಟ್ ಆದ ವ್ಯಕ್ತಿಯ ಹಿಂದೆ ಓಡಿ ,ಕಾಡಿ, ಬೇಡಿ ತಮ್ಮ ತಮ್ಮ ಸ್ಟುಡಿಯೋಗಳಲ್ಲಿ ಕೂರಿಸಿಕೊಂಡು ಬೈದರೂ, ಒದ್ದರೂ, ಸರಿಯೇ ಎರಡೂ ಮೂರು ತಾಸು ಸಮಯ ಹಾಳು ಮಾಡಬೇಕು.
ತಪ್ಪಿದ್ದ್ರೆಹೇಳಿ ಅಂದ್ರಲ್ಲ.
ಬೆಳಗಿನ ಹೊತ್ತು ಹಾದಿ ಬೀದಿ ಜ್ಯೋತಿಷಿಗಳನ್ನು ಕರೆತಂದು ಅವರನ್ನು ಫೋಟೋ, ವಿಡಿಯೋ ಶೂಟ್ ಮಾಡಿಸಿ, ಟಿವಿಯ ಮುಂದೆ ಕೂರಿಸಿ, ಜನರ ಭಾವನೆಗಳ ಜೊತೆ ಚೆಲ್ಲಾಟ ವಾಡುತ್ತಿರುವುದು ತಪ್ಪು ಅಂತ ಅನ್ನಿಸುತ್ತಿಲ್ಲವೇ ?
ಅವರ ಫೋನ್ ನಂಬರ್ ವಿಳಾಸ ಕೊಟ್ಟು ಅವರನ್ನು ನೇರವಾಗಿ ಭೇಟಿ ಮಾಡಲು ಸೂಚಿಸುತ್ತಿರಲ್ಲ ಅದನ್ನು ಏನೆಂದುಕೊಳ್ಳಬೇಕು. ವ್ಯವಹಾರ ಎನ್ನಬೇಕೇ ?
(ನಿಮ್ಮದೇ ಚಾನೆಲ್ ನಲ್ಲಿ ರಾಧ ಹಿರೇಗೌಡ್ರು ಪಿಯುಸಿ ಓದುವ ಹುಡುಗಿ ಪತ್ರಿಕೆಯಲ್ಲಿ ಜಾಹೀರಾತು ನಂಬಿ ಮನೆಯಲ್ಲಿದ್ದ ಚಿನ್ನವನ್ನು ಜ್ಯೋತಿಷಿಗೆ ಕೊಟ್ಟ ಮೋಸವಾಗಿದ್ದ ಪ್ರಕರಣವನ್ನು ಒಂದು ಘಂಟೆ ನಡೆಸಿಕೊಟ್ಟರಲ್ಲ. ಆ ಸಮಯದಲ್ಲಿ ಆ ಬಾಲಕಿಯ ದೊಡ್ಡಪ್ಪ ನೀವು ಚಾನೆಲ್ ನಲ್ಲಿ ತೋರಿಸ್ತೀರಲ್ಲ. ಹಾಗೆಯೇ ಪತ್ರಿಕೆಯನ್ನು ನೋಡಿ ನಂಬಿದ್ದಾಳೆ ಎನ್ನುತ್ತಾರೆ. ) ನಿಮ್ಮ ತಪ್ಪುಗಳು ಕಣ್ಣ ಮುಂದೇನೇ ಇದೆ.
ಟಿ. ಆರ್. ಪಿ. ಗಾಗಿಯೇ ನನ್ನ ಚಾನೆಲ್ ನಡಸಲೇಬೇಕು.
ನಾನು ಓದಿಕೊಂಡಿದ್ದೇನೆ. ನನ್ನ ಕನಸುಗಳನ್ನು ಜನರಿಗೆ ತಲುಪಿಸಬೇಕುಅದಕ್ಕಾಗಿ
ನಾನು ಈ ವಾಹಿನಿ ಆಯ್ಕೆ ಮಾಢಿಕೊಂಡಿದ್ದೇನೆ ಎನ್ನುವ ಶ್ರೀ ಹೆಚ್. ಆರ್. ರಂಗನಾಥ ಎಂಬ ಪತ್ರಕರ್ತರು, ಭಾರತ ದೇಶದ ಸಂವಿಧಾನ ನಮಗೆ ಪವಿತ್ರವಾದ ನಾಲ್ಕನೇ ಅಂಗದ ಜವಾಬ್ದಾರಿ ಯನ್ನು ನೀಡಿದೆ.
ಜನ ಸಾಮಾನ್ಯರ ನೆರವಾಗುವಂತಹ ಕೆಲಸಗಳನ್ನು ಮಾಡೋಣ.
ಈ ಭ್ರಷ್ಟ ವ್ಯವಸ್ಥೆಯಿಂದ ಜನರಿಗೆ ಮುಕ್ತಿಗೊಳಿಸೋಣ.
ಪತ್ರಿಕೋದ್ಯಮದ ಅಸ್ತ್ರ - ಬ್ರಹ್ಮಾಸ್ತ್ರ ನಮ್ಮಲ್ಲಿ ಇದೆ.
ಇವುಗಳಿಂದ ಜನರ ತೆರಿಗೆ ಹಣವನ್ನು ತಿಂದು ತೇಗುತ್ತಿರುವ ಲಂಚ ಭಿಕ್ಷೆ ಬೇಡುತ್ತಿರುವವರ ಮುಖವಾಡವನ್ನು ಕಳಚೋಣ.
ಒಬ್ಬ ಸಾಮಾನ್ಯ ನಾಗರಿಕ, ರೈತನಿಗೆ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ, ನಗರ ಸಭೆ, ಮಹಾನಗರ ಪಾಲಿಕೆ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಇಲ್ಲಿ ಯಾವುದೇ ಲಂಚವಿಲ್ಲದೇ ಸರಿಯಾದ ಸಮಯಕ್ಕೆ ಸರ್ಕಾರಿ ಸೇವೆಗಳು ತಲುಪಿಸುವ ಕಡೆ ಭ್ರಷ್ಟರಿಗೆ ಎಚ್ಚರಿಕೆಯ ಘಂಟೆಯಾಗಿ ಮುಂದೆ ನಿಲ್ಲೋಣ.
ಜನರ ತೆರಿಗೆ ಹಣದಿಂದ ಬಿಡುಗಡೆಯಾಗುವ ಅನುದಾನಗಳು ಪೈಸೆ ಪೈಸೆ ಜನರಿಗೆ ತಲುಪುವಂತೆ ಮಾರ್ಗದರ್ಶಿಯಾಗಿ ಜನರ ಮಧ್ಯೆ ನಿಲ್ಲೋಣ.
ಕೆಲಸಕ್ಕೆ ಸೇರಿದಾಗ ಇದ್ದ ಆಸ್ತಿ ಪ್ರಮಾಣಕ್ಕೂ ಏರಿಕೆಯಾಗುವ ಆಸ್ತಿ ಪ್ರಮಾಣಗಳನ್ನು ಪತ್ತೆ ಹಚ್ಚಿ ಮಾಧ್ಯಮಗಳ ಮೂಲಕ ಜನರ ಮುಂದೆ ಇಡೋಣ.
ಮಾಧ್ಯಮಗಳು ಒಂದು ಎಚ್ಚರಿಕೆಯ ಗಂಟೆಯಾಗಿ, ಭ್ರಷ್ಟರ ಪಾಲಿಗೆ ಚಾಟಿಯಾಗಿ,
ನಮ್ಮ ಕರ್ನಾಟಕ ರಾಜ್ಯದ ಬೀದರ್ ನಿಂದ ಹಿಡಿದು ಚಾಮರಾಜನಗರದವರೆವಿಗೂ ಕಟ್ಟಕಡೆಯ ವ್ಯಕ್ತಿಗೂ ನನ್ನ ಪತ್ರಿಕೋದ್ಯಮ ನೆರವಾಗಲಿ,. ನನ್ನ ಜೀವನ ಸಾರ್ಥಕ ಮಾಡಿಕೊಳ್ಳುತ್ತೇನೆ . ಎಂಬ ಆಯ್ಕೆ ಯಾಕೆ ಮಾಡಿಕೊಳ್ಳಬಾರದು. ಶ್ರೀ ಹೆಚ್. ಆರ್. ರಂಗನಾಥರವರೇ.
ಕೈಯಲ್ಲಿ ಬ್ರಹ್ಮಾಸ್ತ್ರ ಇಟ್ಟುಕೊಂಡು ಇಂತಹದ್ದೊಂದು ಪ್ರಯತ್ನ ಮಾಡಿ.
ಕೋಟು ಸೂಟು, ಸೆಂಟೂ ಹಾಕಿಕೊಂಡು ಕಾರಿನಲ್ಲಿ ಬರುವವರಿಗಿಂತ,
ನಮಗಾಗಿ ಬೆವರು ಸುರಿಸೋ ರೈತರಿಗಾಗಿ, ಮೈ ಮೇಲೆ ಬಟ್ಟೆ ಇಲ್ಲದೇ,
ಮೂರು ಹೊತ್ತು ಹೊಟ್ಟೆಗೆ ಅನ್ನವಿಲ್ಲದ ನಮ್ಮ ನಿಮ್ಮ ಹಾಗೆ ಜೀವವನ್ನು ಹೊಂದಿರುವ ಜನಸಾಮಾನ್ಯರಿಗಾಗಿ , ಬಳಕೆಯಾಗಿ. ಮಧ್ಯಮ ವರ್ಗದವರ ಧ್ವನಿಯಾಗಿ..
ನಮಗೆ ಟಿ. ಆರ್. ಪಿ. ಇಲ್ಲದೇ ಹೋದ್ರೆ........
ನಮ್ಮ ಟಿವಿ ಚಾನೆಲ್ ಕ್ಲೋಸ್ ಆದ್ರೆ.......
ನಾವು ಸಂಬಳ ಕೊಡದೇ ಇದ್ರೆ,.....
ನಾವು ಸಂಬಳ ಕೊಡಲು ಲೇಟು ಮಾಡಿದ್ರೆ...... ಇವು ನಿಮ್ಮ ಆತಂಕಗಳೇ ಆಗಿದ್ದಲ್ಲಿ.
ನಮ್ಮ ಭಾರತ ದೇಶ ಮತ್ತು ಅದರೊಳಗಿನ ಕರ್ನಾಟಕದಲ್ಲಿ ಸತ್ಯ-ನ್ಯಾಯ-ನೀತಿ-ಧರ್ಮ-ಪ್ರಾಮಾಣಿಕತೆಯೂ ಅಲ್ಪಸ್ವಲ್ಪ ಉಳಿದಿದೆ.
ಭ್ರಷ್ಟಾಚಾರ ಮುಕ್ತ ಸಮಾಜದ ಸಂಕಲ್ಪ ಮಾಡಿ, ಪ್ರಾಮಾಣಿಕವಾಗಿ ನಿಲ್ಲುವುದಾದ್ರೆ ಬಡವರ, ರೈತರ ಪರ ನಿಲ್ಲುವುದಾದರೆ,
ಬೀದರ್ ನಿಂದ ಚಾಮರಾಜನಗರದವರೆವಿಗೂ ನಿಮ್ಮಿಂದ ಒಂದೇ ಒಂದು ಪೈಸೆ ಪಡೆಯದೇ ಸಮಾಜದಲ್ಲಿ ತುಂಬಿಕೊಂಡಿರುವ ಭ್ರಷ್ಟ ಕೊಳೆಯನ್ನು ತೊಳೆಯಲು ಸಮಾಜ ಸೇವೆಗಾಗಿ ಯುವಕರು ಕೈ ಜೋಡಿಸುತ್ತಾರೆ.
ಪ್ರಯತ್ನವೇ ಇಲ್ಲದೇ.. ಆಗೋದಿಲ್ಲ ಎಂದುಕೊಂಡರೆ ಯಾವುದಾಗುತ್ತೆ ಹೇಳಿ ?
ಮೂರು ಕೋಟಿ ಇಲ್ಲದೇ ಚುನಾವಣೆ ಸ್ಪರ್ಧಿಸಲು ಆಗುತ್ತಿಲ್ಲ ಎನ್ನುವ ರಾಜಕಾರಣಿ.
ಜನರ ತೆರಿಗೆ ಹಣದಿಂದ ಪಡೆಯುವ ಸಂಬಳ ಭತ್ಯೆ ಸಾಕಾಗದೇ ಲಂಚ-ಭಿಕ್ಷೆ ಬೇಡುವ ಸರ್ಕಾರಿ ನೌಕರ
ಹಾಗೆಯೇ
ಟಿ. ಆರ್. ಪಿ. ಎಂಬ ಆಕ್ಸಿಜನ್ ಇಲ್ಲದೇ...ಪವಿತ್ರ ಪತ್ರಿಕೋದ್ಯಮವನ್ನು ವ್ಯವಹಾರವನ್ನಾಗಿ ಬಳಸಿಕೊಳ್ಳುತ್ತೇವೆ ಎನ್ನುವ ಪತ್ರಕರ್ತರು ಈ ದೇಶಕ್ಕೆ ಬೇಡ ಅನ್ನಿಸುತ್ತದೆ
* ಪತ್ರಿಕೋದ್ಯಮದಿಂದ ಸಾಮಾಜಿಕ ಬದಲಾವಣೆ ಸಾಧ್ಯ ಅನ್ನೋದನ್ನು.
* 1200 ಜನರ ಅಭಿಪ್ರಾಯದಿಂದ ಫಿಕ್ಸ್ ಆಗುವ ಟಿ. ಆರ್. ಪಿ. ರೇಟಿಂಗಿಂತಲೂ
ಮಿಗಿಲಾದುದು ಇದೆ ಅನ್ನೋದನ್ನು ತೋರಿಸೋಣ ಬನ್ನಿ...........................
ಪ್ರಯತ್ನ ಮಾಡುವಿರಾ ?
ಅಥವಾ ಆ ಚರ್ಚೆಯಲ್ಲೂ ಒಂದಿಷ್ಟೂ ಟಿ. ಆರ್.ಪಿ. ಜಮಾ ಆಯಿತು ಅಂತ ಖುಷಿ ಪಡುತ್ತೀರಾ ?
ನಾನು ಎನ್ನುವುದಕ್ಕಿಂತ ನಾವು ಎನ್ನೋಣ.
ವ್ಯವಹಾರಕ್ಕಿಂತ ದೇಶ ಮುಖ್ಯ.
ಪವಿತ್ರ ಪತ್ರಿಕೋದ್ಯಮದ ಮೌಲ್ಯಗಳ - ಮೌಲ್ಯಗಳನ್ನು ನಾವಾಗಿಯೇ ಅಳಿಸುವುದು ಬೇಡ.
ರಾಜಕಾರಣಿಗಳನ್ನು... ಉದ್ಯಮಿಗಳನ್ನು ಓಲೈಸುವುದರಿಂದ ನಿಮ್ಮದೊಂದು ಪತ್ರಿಕ "ಉದ್ಯಮ" ಸಂತುಷ್ಟವಾಗಬಹುದು.
ಅದೇ ಪತ್ರಿಕೋದ್ಯಮವನ್ನು ಪ್ರಾಮಾಣಿಕವಾಗಿ, ಸಾಮಾಜಿಕ ಸೇವೆಗಾಗಿ ತೊಡಗಿಸಿಕೊಂಡರೆ.
ಭಾರತೀಯರಾಗಿ ಹುಟ್ಟಿ, ಭಾರತೀಯರಿಗೆ ನೆರವಾಗಿ, ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಿಸುವಲ್ಲಿ ನಿಮ್ಮಪಾತ್ರ. ನಿಮ್ಮೆಲ್ಲರ ಜೀವನ ಸಾರ್ಥಕ ಗೊಳಿಸುತ್ತದೆ.
ಒಂದ್ಸಾರಿ ತಮ್ಮ ಮನಸ್ಸಾಕ್ಷಿಯ ಜೊತೆ ಮಾತಾನಾಡಿಕೊಳ್ಳಿ. ಕೆಲವೇ ಜನರ ಹೊಟ್ಟೆ ತುಂಬಿಸುವುದಕ್ಕಾಗಿ ಮನಸ್ಸಿಲ್ಲದ ಮನಸ್ಸಿನಲ್ಲಿ ಭ್ರಷ್ಟ ವ್ಯವಸ್ಥೆಯ ಜೊತೆ ಹೊಂದಾಣಿಕೆ ಮಾಡಿಕೊಂಡು ಪವಿತ್ರ ಪತ್ರಿಕೋದ್ಯಮಕ್ಕೆ ಮೋಸ ಮಾಡುವುದಕ್ಕಿಂತ,
ಇದೇ ಪವಿತ್ರ ಪತ್ರಿಕೋದ್ಯಮದ ಅಸ್ತ್ರವನ್ನು ಬಳಸಿಕೊಂಡು ಈ ವ್ಯವಸ್ಥೆಯನ್ನು ಶುದ್ಧಗೊಳಿಸಿ, ಜನಸಾಮಾನ್ಯರ ನೆರವಿಗೆ ನಿಲ್ಲಬಹುದೇ ?
ನಂತರ ನಿರ್ಧಾರ ಮಾಡಿ. ಮುನ್ನೆಡೆಯಿರಿ.
ತಮ್ಮ ಸಾಮಾಜಿಕ ಸೇವೆಗಾಗಿ, ನನ್ನಂತಹವರು ರೂಪು ರೇಷಗಳನ್ನು, ಸಲಹೆಗಳನ್ನು, ಗುರಿ ತಲುಪುವುದಕ್ಕಾಗಿ, ಸಹಕಾರ ಇದ್ದೇ ಇರುತ್ತದೆ. ಬಳಸಿಕೊಳ್ಳಬಹುದು.
ಒಳಿತು ಮಾಡೋ ಮನುಜ ಭೂಮಿಯ ಮೇಲಿರೋದು ಮೂರು ದಿವಸ.....
(ನಿನ್ನೆಯ ಚರ್ಚೆಯನ್ನು ನೋಡಿ, ಕೇಳಿದ ಮೇಲೆ ನನ್ನ ಮನಸ್ಸಿನಲ್ಲಿ ಮೂಡಿದ್ದನ್ನು ನನಗೆ ತಿಳಿದಿರುವ ಕನ್ನಡದಲ್ಲಿ ಬರೆದುಕೊಂಡಿದ್ದೇನೆ.)
-ರಾಜು ಮೌರ್ಯ ದಾವಣಗೆರೆ.
rajudavanagere@gmail.com.








